Sunday, June 27, 2010



ಹತ್ಯೆ "ಮರ್ಯಾದೆ" ತಂದೀತೆ...?

"ಜೀವ ತೆಗೆದೇವು, ಜಾತಿ ಬಿಡೆವು" ಎಂಬ ಕ್ರೂರ ಸಂದೇಶದೊಂದಿಗೆ ಅಮಾನವೀಯತೆಯನ್ನು ಜಗತ್ತಿಗೆ ಸಾರ ಹೊರಟಿರುವ ಜೀವಿಗಳು, ಹೆತ್ತ ಮಕ್ಕಳನ್ನೇ ಹತ್ಯೆ ಮಾಡೋ ಮೂಢಾಂಧರು, ಪ್ರಪಂಚ ಕಂಡು ಕೇಳರಿಯದ ಯಾವುದೋ ಹಿಂದುಳಿದ ಅನಾಗರೀಕ ಪ್ರದೇಶದವರಲ್ಲಾ....ಶಾಂತಿಯ ಬೀಡೆನಿಸಿರುವ ಭವ್ಯ ಬಾರತ ಮಾತೆಯ
ವೀರಪುತ್ರರು. ಹರಿಯಾಣ, ರಾಜಸ್ತಾನ್, ಉತ್ತರ ಪ್ರದೇಶ, ಜಾರ್ಖಂಡ್,
ಮಧ್ಯಪ್ರದೇಶ, ಪಂಜಾಬ್, ಹೀಗೆ ಉತ್ತರ ಭಾರತದ ಒಟ್ಟು ಏಳು ಜಿಲ್ಲೆಗಳಲ್ಲಿ ಸರ್ವೇ ಸಾಮಾನ್ಯವಾಗಿರುವ , ದಿನ ನಿತ್ಯದ ಚಟುವಟಿಕೆಯಾಗಿರುವ "ಮರ್ಯಾದ ಹತ್ಯೆ" ತಾಲೀಬಾನಿನ ಕಠೋರ ನ್ಯಾಧೀಕರಣಕ್ಕೇ ಸಡ್ಡು ಹೊಡೆಯುವಂತಿದೆ. 'ಖಾಫ್ ಪಂಚಾಯ್ತಿ' ಅನ್ನೋ ಬೂಟಾಟಿಕೆಯ ನ್ಯಾಯಸ್ಥಾನದಲ್ಲಿ ಆಗ ತಾನೇ ನವ ಜೀವನಕ್ಕೆ ಕಾಲಿಡಲು ಸನ್ನದ್ಧರಾದ ಯುವ ದಂಪತಿಗಳನ್ನು ಹಳ್ಳಿಯ ಜನರೆದುರಿಗೆ ನಿಲ್ಲಿಸಿ ಅವರ ಕುಟುಂಬದವರೇ ಕ್ರಿಮಿನಾಶಕದ ಗುಳಿಗೆಗಳನ್ನು ಒತ್ತಾಯವಾಗಿ ನುಂಗಿಸಿ, ಸತ್ತ ದೇಹವನ್ನು ಪೋಲೀಸರಿಗೆ ಯಾವುದೇ ಸುಳಿವು ಸಿಗದಂತೆ
ಪಂಚಭೂತಗಳಲ್ಲಿ ಲೀನವಾಗಿಸುವುದರಲ್ಲಿ ಈ ಜನರ ಅನುಭವ ಜನ್ಮ-ಜನ್ಮಾಂತರದ್ದು.

ಖಾಫ್ನ ಕಥೆ:
ಋಗ್ವೇದದ ಕಾಲ ಅಂದರೆ ಸುಮಾರು ಕ್ರಿ.ಪೂ.2500 ರಿಂದಲೂ ಬಳಕೆಯಲ್ಲಿರುವ ಪದ 'ಖಾಫ್'. ಬಹು ಚರ್ಚೆಗೆ ಗ್ರಾಹ್ಯವಾಗಿರೋ ಹಿಂದಿ ಪದ, 'ಪಾಲ್, ಜನಪದ, ಗಣಸಂಘ' ಅನ್ನೋ ಪಂಚಾಯ್ತಿಗಳಲ್ಲಿ ಇದು ಮೊದಲನೆಯದು. ಹದಿನಾಲ್ಕನೆಯ ಶತಮಾನದಿಂದೀಚೆಗೆ ಖಾಫ್ ಪಂಚಾಯ್ತಿ, ಸುಮಾರು 84 ಹಳ್ಳಿಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿತ್ತು. ಪ್ರಸ್ತುತ ಅದು 12 ರಿಂದ 24 ಹಳ್ಳಿಗಳ ಗುಂಪಾಗಿದೆ. ಹತ್ತರಿಂದ ಹದಿನೈದು ಹಿರಿತಲೆಗಳ ಪೀಠವೇ ಈ ಖಾಫ್ ಪಂಚಾಯ್ತಿ. ಪೋಲೀಸರಿಂದ ಅಥವಾ ನ್ಯಾಯಾಲಯದಿಂದ ನ್ಯಾಯದೊರಕಿಸಿಕೊಳ್ಳಲು ವರ್ಷಗಳ ಸತತ ಪ್ರಯತ್ನಬೇಕು, ಇದನ್ನು ತಪ್ಪಿಸುವ ದೃಷ್ಟಿಯಲ್ಲಿ ತಾವೇ ತೀಮರ್ಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಬಣ್ಣಿಸಿಕೊಳ್ಳುವ ನರಹಂತಕರು, ಗೋತ್ರದ ಹೆಸರಿನಲ್ಲಿ, ಹಳ್ಳಿಯ ಪ್ರತಿಷ್ಠೆ, ವಂಶದ ಗೌರವ ಅನ್ನೋ ಕಳ್ಳ ನೆಪ ಒಡ್ಡಿ
ಮುಗ್ಧರ ಮಾರಣ ಹೋಮವನ್ನೇ ನಡೆಸುತ್ತಿದ್ದಾರೆ. ಇಲ್ಲಿ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ಬೇಕಾಬಿಟ್ಟಿಯಾಗಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ತಪ್ಪನ್ನು ಮುಚ್ಚಿಹಾಕಲು ಖಾಫ್ ಪಂಚಾಯ್ತಿಯೆಂಬ ಹೀನ ಡೊಳ್ಳು ಸಭೆಗೆ ಬಲಿಪಶುವನ್ನಾಗಿಸುತ್ತಾರೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪಂಚಾಯ್ತಿಗಳಲ್ಲಿ ಇದೂವರೆಗೂ ಹೆಣ್ಣಿನ ಸಮಸ್ಯೆಗಳ ವಿಚಾರವಾಗಿ ಯಾವತ್ತೂ ಪ್ರಸ್ತಾಪವಾಗದೆ ಇರೋದು. ಇದು ಕೊಲೆಗೇಡಿತನಕ್ಕೊಂದು ರಾಜಮಾರ್ಗದ ಸೃಷ್ಟಿಯಷ್ಟೇ.


ಅನಾಹುತ:
ಹೆಣ್ಣು ಗರ್ಭಗಳ ಹತ್ಯೆಯಿಂದಾಗಿ, ಹೆಣ್ಣು-ಗಂಡಿನ ಸರಾಸರಿ ಸಂಖ್ಯೆಯಲ್ಲಿ ಏರುಪೇರಾಗಿದೆ. ಕೆಲವೊಮ್ಮೆ ಗಂಡಸರಿಗೆ ಶಿಕ್ಷೆಯಲ್ಲಿ ಹಿಡಿತವಿದ್ದರೂ, ಹೆಂಗಸರಿಂದ ಊರಿನ ಮರ್ಯಾದೆಗೆ ಯಾವುದೇ ದಕ್ಕೆಯಾಗೋ ಹಾಗಿಲ್ಲ. ಸಣ್ಣವಯಸ್ಸಿನಿಂದಲೇ ಹುಡುಗ-ಹುಡುಗಿಯನ್ನು ಬೇರೆ ಬೇರೆಯಾಗಿ ಬೆಳೆಸುತ್ತಾ, ಶಾಲೆಗಳಿಗೂ ತಮ್ಮ ಪ್ರತ್ಯೇಕ ಸಮಯವನ್ನು ನಿಗದಿ ಮಾಡಿರುತ್ತಾರೆ. ಯೌವ್ವನದಲ್ಲಿ ಆಗುವಂತ ಪ್ರಕೃತಿ ಸಹಜ ಅಭಿವ್ಯಕ್ತತೆಯನ್ನು ಕ್ಷೀಣಿಸಲು ಪಣತೊಟ್ಟಿರುತ್ತಾರೆ, ಎಲ್ಲಿ ಪ್ರೀತಿಸಿ ಓಡಿ ಹೋಗುತ್ತಾರೋ ಎಂಬ ಭಯದಿಂದ ಬಾಲ್ಯವಿವಾಹವನ್ನು ಮಾಡಿರುತ್ತಾರೆ. ಅಕಸ್ಮಾತ್ ಹುಡುಗ ಹುಡುಗಿ ಯಾರೇ ಬಿಟ್ಟು ಹೋದರೆಂದರೂ ಅವರ ಕಥೆ ಮುಗಿದ ಹಾಗೆಯೇ. ಅದರೊಂದಿಗೆ ಅವರ ಮನೆಯವರೂ ಶಿಕ್ಷೆ ಅನುಭವಿಸಬೇಕು, ದಂಡ ಕಟ್ಟಬೇಕು ಅಥವಾ ಊರಿನಿಂದ ಹೊರಹೋಗಬೇಕು. ಈ ಕಾರಣದಿಂದಲೇ ಹೆತ್ತವರು ಕೂಡ ಕ್ರೂರಿಗಳಾಗಿ ವತರ್ಿ
ಸುತ್ತಾರೆ, ಹೊರಗಿನ ಒತ್ತಡ ತಮ್ಮ ಮಕ್ಕಳನ್ನೇ ಸರ್ವನಾಶಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ವಿಚಿತ್ರ ಹಿಂಸೆಕೊಟ್ಟು ಮಕ್ಕಳೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ನಿಂತವರು ಅದೆಷ್ಟೋ ಪ್ರೇಮ ಪಕ್ಷಿಗಳು.

ಆಹುತಿಯಾದವರು:
ಮಾರ್ಚ್ 2009ರಂದು ಹರಿಯಾಣದ ಜಿಂದ್ ಜಿಲ್ಲೆಯ ಒಂದು ಗ್ರಾಮದಲ್ಲಿ ಒಂದೇ ಗೋತ್ರದಲ್ಲಿ ಮದುವೆಯಾಗಿದ್ದಾರೆಂಬ ಒಂದೇ ಕಾರಣಕ್ಕೆ "ವೇದ್ ಪಾಲ್" ಎಂಬ ಯುವಕನಿಗೆ ಖಾಫ್ ಪಂಚಾಯ್ತಿಯಲ್ಲಿ ಮರಣದಂಡನೆಯನ್ನು ವಿಧಿಸುತ್ತಾರೆ. ಇದನ್ನು ಜೂನ್ ತಿಂಗಳಿನಲ್ಲಿ ಜಾರಿಗೆ ತರುತ್ತಾರೆ ಅದೂ, ಜನರ ಮಧ್ಯೆ ಮನಸ್ಸೋಯಿಚ್ಛೆ ಹೊಡೆದು ಉರುಳಿಸೋ ಮೂಲಕ. ಇದೇ ಕಾರಣಕ್ಕೆ ಕುರುಕ್ಷೇತ್ರ ಪ್ರದೇಶದಲ್ಲಿ 2007
ನೇ ಇಸವಿಯಲ್ಲಿ ಮನೋಜ್(23) ಹಾಗೂ ಬಬಲೀ(19) ಯುವಜೋಡಿಯನ್ನು ವಿಷಕೊಟ್ಟು ಹೆತ್ತವರೇ ಮುಗಿಸಿಬಿಟ್ಟಿದ್ದರು. ಖಾಫ್ನ ಮುಖಂಡರ ಪ್ರಕಾರ ಈ ಪ್ರೇಮಿಗಳಿಗೆ ಅಣ್ಣ-ತಂಗಿಯ ಸಂಬಂಧವಂತೆ...! ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿಯುತ್ತದೆ, ತಮ್ಮ ಆಸ್ತಿಯನ್ನು ವೃದ್ಧಿಗೊಳಿಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ತಂತ್ರಗಾರಿಕೆ ಇದರಲ್ಲಿ ಅಡಕವಾಗಿದೆ [ಪ್ರಮುಖರು ಹರಿಯಾಣದ ಜಾತರು].
ಮಾಧ್ಯಮಗಳಲ್ಲಿ ಚರ್ಚೆಗೆ ಎಡೆ ಮಾಡಿದ್ದ ಮತ್ತೊಂದು ಪ್ರಕರಣ ಜಾರ್ಖಂಡ್ ಮೂಲದ ದೆಹಲಿಯ ಜರ್ನಲಿಸ್ಟ್ ನಿರೂಪಮಾ ಪತಕ್(23), ತನ್ನ ಊರಿನ ಮನೆಯಲ್ಲಿ ಏಪ್ರಿಲ್ 29ರಂದು ತನ್ನ ಕುಟುಂಬದವರಿಂದಲೇ ಉಸಿರುಗಟ್ಟಿ ಕೊಲೆಯಾಗಿದ್ದಳು. ಪ್ರಿಯಭಾ
ನಶೂ ರಂಜನ್, ನಿರೂಪಮಾಳ ಗೆಳೆಯ ಈತನೂ ಒಬ್ಬ ಜರ್ನಲಿಸ್ಟ್. ಇವರಿಬ್ಬರ ಮದುವೆಗೆ ನಿರೂಪಮಾ ಮನೆಯವರಿಂದ ಆಕ್ಷೇಪವಿತ್ತು, ಕಾರಣವಿಷ್ಟೇ ಹುಡುಗ ಕೆಳಜಾತಿಯವನೆಂಬುದು. ಇದಕ್ಕೆ ವಿರೋಧವನ್ನೊಡ್ಡಿದ್ದಕ್ಕೆ ಕುಟುಂಬದ ಮರ್ಯಾದ ಉಳಿಸಬೇಕೆಂಬ ದುರಾಲೋಚನೆಯಿಂದ ಮುಗ್ಧ ಮಗಳ ಜೀವಕಳೆದಿದ್ದಾರೆ. ಈಕೆ ಸತ್ತಾಗ ಎರಡೂವರೆ ತಿಂಗಳ ಪುಟ್ಟ ಜೀವ ಹೊಟ್ಟೆಯಲ್ಲಿ ಮೊಳಕೆಯೊಡೆದಿತ್ತು. ಹೀಗೆ ಕುಲ-ಕುಲವೆಂದು ಅದೆಷ್ಟು ಕೊಲೆಗಳಾಗಿವೆಯೋ...?
ಈ ಶತಮಾನದಲ್ಲೂ ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆಯಾ ಎಂದು ಆಶ್ಚರ್ಯವಾದರೂ, ಇವು ಕಠೋರ ಸತ್ಯಗಳೇ. ವಿಕೃತ ಮೇಲ್ವರ್ಗದ ಮನಸುಗಳ ಕರಾಳ ಆಚರಣೆಗೆ ಹಿಂದುಳಿದ ಬಡ ಕುಟುಂಬವೊಂದು ಮಿರ್ಚ್ ಪುರ ಗ್ರಾಮದಲ್ಲಿ ಬಲಿಯಾಗಿದೆ. ಖಾಫ್ ಪಂಚಾಯ್ತಿಯ ವಿರುದ್ಧದ ಒಂದೇ ಒಂದು ಮಾತಿಗೆ ಪೋಲೀಸರ ಎದುರಿಗೇ 20 ಮನೆಗಳಿಗೆ ಬೆಂಕಿ ಇಡಲಾಯಿತು, ಇದರಲ್ಲಿ 18 ವರ್ಷದ ಅಂಗವಿಕಲ ಹೆಣ್ಣುಮಗಳು ಹಾಗೂ ವಯಸ್ಸಾದ ಆತನ ತಂದೆ ಸುಟ್ಟು ಕರಕಲಾದರು.
ಒಟ್ಟಿನಲ್ಲಿ ಖಾಫ್ ಪಂಚಾಯ್ತಿ, ಮೇಲ್ಜಾತಿಯ ಹುಡುಗಿ, ಕೆಳಜಾತಿಯ ಹುಡುಗ, ಒಂದೇ ಗೋತ್ರದವರು, ಒಂದೇ ಊರಿನವರು ಮದುವೆಯಾಗೋದನ್ನ ಒಪ್ಪೋದಿಲ್ಲವಂತೆ. ಹಾಗಾದರೆ ಅಂತಾರಾಷ್ಟ್ರೀಯ ವಿವಾಹವೇ ಇದಕ್ಕೆ ಪರಿಹಾರದಂತೆ ತೋರುತ್ತದೆ.

*ಛೆ! ಇದೆಂಥಾ ಸಂಸ್ಕೃತಿ...?
"ಪ್ರೀತಿ ಮಧುರ, ತ್ಯಾಗ ಅಮರ" ಇದನ್ನು ಅಕ್ಷರಶಃ ನಿಜಮಾಡುವ ನಿಟ್ಟಿನಲ್ಲಿ ತರಗೆಲೆಗಳಂತೆ ಯುವ ಜೋಡಿಯ ತಲೆ ಉರುಳುತ್ತಿವೆ. ಇಂಥ ಕುರುಡು ಘೋರ ಪದ್ಧತಿಯನ್ನು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಿಸುವವರೇ ಇಲ್ಲವಾ? ನಮ್ಮ ಸೆಕ್ಯುಲರರ್ ಕಾನೂನಿನ ಚೌಕಟ್ಟಿನ ಒಳಗೆ ಈ ವಿಷಯಗಳು ಪ್ರಸ್ತುತವೇ ಅಲ್ಲವಾ?. ಎಲ್ಲಾ ಇದ್ದು ನ್ಯಾಯದ ಕಣ್ಣಿಗೆ "ಕೂಲಿಂಗ್ ಗ್ಲಾಸ್" ಹಾಕಿ ಕೂರಿಸಿರುವವರು, ಎಲ್ಲಿಯೂ ಸಲ್ಲದೆ ರಾಜಕಾರಣಕ್ಕೆ ಬಂದ ಮತಾಂಧ ರಾಜಕಾರಣಿಗಳು. ಖಾಫ್ ಪಂಚಾಯ್ತಿ ಅನ್ನೋದು ಇವರ ಪಾಲಿನ ದೊಡ್ಡ ವೋಟ್ ಬ್ಯಾಂಕ್. ಇದೊಂದು ರೀತಿಯ ಭದ್ರಕೋಟೆಯಿದ್ದಂತೆ, ಅವರನ್ನು ಸಂಭಾಳಿಸುವ ನಿಟ್ಟಿನಲ್ಲಿ ಎಂ.ಎಲ್.ಎ, ಎಂ.ಪಿ ಗಳು ಪೋಲಿಸರನ್ನು ಕೂಡಿಕೊಂಡು ಬಾಂಧವ್ಯದ ಬೆಸುಗೆ ಬೆಸೆದಿದ್ದಾರೆ. ಇವರಿಂದ ದೇಶದ ಉನ್ನತಿಯ ಯೋಚನೆ ಮಾಡುವುದಾದರೂ ಹೇಗೆ...? ಅಷ್ಟು ಸಾಲದೆಂಬುದಂತೆ ತಮ್ಮ ಕುತಂತ್ರ ಬುದ್ಧಿಯಿಂದ ಸೆಕ್ಷನ್ 5ರ ಹಿಂದೂ ವಿವಾಹ ಕಾಯ್ದೆ, 1955ಕ್ಕೆ ತಿದ್ದುಪಡಿ ತಂದು ಖಾಫ್ ಪಂಚಾಯಿತಿಯಲ್ಲಿರುವಂತೆ ಸ್ವಗೋತ್ರದ ಮದುವೆಯನ್ನು ನಿಷೇಧಿಸಬೇಕೆಂದು ಹೋರಾಟವನ್ನು ನಡೆಸುವಂತೆ ಜನರನ್ನು ಪ್ರೇರೇಪಿಸಿದ್ದಾರೆ. ಕಾನೂನಿನ ಪ್ರಕಾರ ಇವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರ ಸಮುದಾಯದಲ್ಲಿ ಅವರದೇ ಪ್ರಭಾವ ಹೆಚ್ಚು.
ಕಸಬ್ನಂತಹ ಭಯೋತ್ಪಾದಕನನ್ನು ಕೊಲ್ಲಲು ಇಷ್ಟು ದಿವಸಗಳು ಸವೆಸುತ್ತಿರುವ ನಮ್ಮ ನ್ಯಾಯ ವ್ಯವಸ್ಥೆ, ಅಫ್ಜಲ್ ಗುರುವನ್ನು ನೇಣು ಹಾಕಲು ಸಿಬ್ಬಂದಿಯೇ ಇಲ್ಲವೆಂದು ಹೇಳುತ್ತಿರುವುದು ಈ ಮರ್ಯಾದ ಹತ್ಯೆಯ ಮುಂದೆ ನಗೆಪಾಟಲಿಗೆ ಗುರಿಯಾಗಿದೆ. ಎಷ್ಟೋ ಮುಗ್ಧ ಮನಸ್ಸುಗಳು ದಿನನಿತ್ಯ ಕ್ರೌರ್ಯದ ಕತ್ತರಿಯ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದರೂ ಅವರನ್ನು ರಕ್ಷಿಸಲಾಗದ ಕಾನೂನು ಎಷ್ಟು ಸಮರ್ಥವೆಂಬ ಸಂಶಯ ಸುಳಿದಾಡುತ್ತದೆ. ಶತಮಾನಗಳಿಂದ ಸಹಿಸುತ್ತಾ ಬಂದಿರುವ ಜನತೆ ಇನ್ನಾದರೂ ಎಚ್ಚರಗೊಳ್ಳಬೇಕು ಮೌಢ್ಯತೆಯ ಚೌಕಟ್ಟನ್ನು ದಾಟಿ ಹೊರಬರಬೇಕು. ಮುಖ್ಯವಾಗಿ ಯುವಜನತೆಯ ಉಳಿವು ದೇಶದ ಬೆಳವಣಿಗೆಗೆ ಅವಶ್ಯಕ, ತಮ್ಮ ಬಾಲ್ಯದಿಂದ ಕಟ್ಟು ಪಾಡುಗಳಿಗೆ ಜೋತುಬಿದ್ದು, ತಮ್ಮ ಸುತ್ತಲಿನ ಸಮಾಜಕ್ಕೆ ಹೆದರಿ, ಒತ್ತಡಕ್ಕೆ ಮಣಿದು ವಂಶದ ಕುಡಿಗಳನ್ನೇ ನಾಶಮಾಡಲು ಹೊರಟಿರುವವರ ಮನಸ್ಸು, ಬುದ್ಧಿ ಹತೋಟಿಯಲ್ಲಿಲ್ಲ ಎಂಬುದು ಸತ್ಯ. ಇದರ ಬಗೆಗೆ ದೇಶದ ಜನ ಪೂರಕವಾಗಿ ಯೋಚಿಸಬೇಕು, ಆ ಜನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಹಾಗೇ ತಮ್ಮ ಸ್ವಾರ್ಥಕ್ಕೆ ಬೂಟಾಟಿಕೆಯ ಪಂಚಾಯ್ತಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಕೆಲವು ದಿನಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್, ಹರಿಯಾಣ ಸೇರಿದಂತೆ ಏಳು ಜಿಲ್ಲೆಗಳಿಗೆ ನೋಟೀಸ್ ಜಾರಿಮಾಡಿದೆ. ಹಾಗೂ ಕೇಂದ್ರ ಕಾನೂನು ಸಚಿವರಾದ ಎಂ.ವೀರಪ್ಪ ಮೊಯಿಲಿ ಮರ್ಯಾದ ಹತ್ಯೆಯ ವಿರುದ್ಧ ಹೊಸ ಕಾನೂನು ಸಮರವನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದರೂ, ಈ ಬಗ್ಗೆ ಜುಲೈ 22ರಿಂದ ಪ್ರಾರಂಭವಾಗುವ ಅಧಿವೇಶನದ ಕಲಾಪದಲ್ಲಿ ಚರ್ಚೆ ನಡೆಯಬೇಕು. ರಾಜಧಾನಿ ದೆಹಲಿಯೂ ಈ ಘಟನೆಗಳಿಂದ ಹೊರತಾಗಿಲ್ಲವೆಂದರೆ, ಇನ್ನು ಹಳ್ಳಿಗಳ ಗತೀ.....?


0 Comments:

Post a Comment