Sunday, June 13, 2010


ಬಿಹಾರದಲ್ಲಿ ಬೆಂಗಳೂರಿನ ಬಿಸಿನೆಸ್ ಮ್ಯಾನ್

ಸೋಮವಾರ ಮಧ್ಯಾಹ್ನ ಬಿಹಾರ ರಾಜಕೀಯ ಕ್ಷೇತ್ರದಲ್ಲಿ ತಲ್ಲಣ ಉಂಟು ಮಾಡಿದವರು ಬೆಂಗಳೂರಿನ ಬಿಸಿನೆಸ್ ಮ್ಯಾನ್ ಉದಯ್ ಬಿ. ಗರುಡಾಚಾರ್. ಉದಯ್ ರಾಜ್ಯ ಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆಯೊದ್ದಳು ನಾಮಪತ್ರ ಸಲ್ಲಿಸುತ್ತಿದ್ದಂತೆ ಲಾಲೂ ಪ್ರಸಾದರ ಹಿಂಬಾಲಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬಿಹಾರದ ಮಾಧ್ಯಮಗಳೂ ಸೇರಿದಂತೆ ಅನೇಕ ರಾಜಕಾರಣಿಗಳು ಈತ ಯಾರು? ಎಲ್ಲಿದ್ದ? ಎಲ್ಲಿಂದ ಬಂದ? ಏಕೆ ಇಲ್ಲಿಗೆ ಬಂದ?...ಅನ್ನೋ ಪ್ರಶ್ನೆಗಳ ಗಂಟು ಹಿಡಿದು ಉತ್ತರವನ್ನು ಸಂಶೋಧಿಸಲು ಹೊರಟ್ಟಿದ್ದಾರೆ. ಈ ಆಗು-ಹೋಗಿನ ಬಗ್ಗೆ ಒಂದು ಸಂಕ್ಷಿಪ್ತ ನೋಟವನ್ನು ಹರಿಬಿಡೋಣ...

*ಹಿನ್ನೆಲೆ:
ಬೆಂಗಳೂರಿನಲ್ಲಿರುವ ಪ್ರಮುಖ ಮಾಲ್ಗಳಲ್ಲಿ ಒಂದೆನಿಸಿರುವ 'ಗರುಡಾಮಾಲ್'ನ ಒಡೆಯರಾದ ಉದಯ್ ಬಿ.ಗರುಡಾಚಾರ್. ಇವರು ಕರ್ನಾಟಕದ ಮಾಜಿ ಮಹಾನಿರ್ದೇಶಕರಾದ ಬಿ.ಎನ್.ಗರುಡಾಚಾರ್ರವರ ಪುತ್ರ. ಗರುಡಾ ಬಿಲ್ಡರ್ಸ್ನ ಮಾಲಿಕರಾಗಿರುವ ಉದಯ್ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ. ಕರ್ನಾಟಕದಲ್ಲಿ ಹುಟ್ಟಿ ಬೆಳೆದವ ಬಿಹಾರದ ಮೇಲ್ಮನೆಯನ್ನು ಸೇರಬಯಸಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಕರ್ನಾಟಕದಲ್ಲಿ ಬಿ.ಜೆ.ಪಿ ಪಕ್ಷದ ಬೆಂಬಲವಿದ್ದರೂ ಬಿಹಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅಚ್ಚರಿಯ ಸಂಗತಿ. ಅದೂ ಕರ್ನಾಟಕದ ಮಟ್ಟಿಗೆ ಪಕ್ಷೇತರರಾಗಿ ಹೊರರಾಜ್ಯದಲ್ಲಿ ರಾಜ್ಯಸಭೆಯ ಸ್ಥನಕ್ಕೆ ಸೆಣಸಿದವರು ಇದುವರೆಗೂ ಇರಲಿಲ್ಲ.

*ಡೆಡ್ ಲೈನ್:
ಬಿಹಾರದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸೋಮವಾರ ಮಧ್ಯಾಹ್ನ 3 ಗಂಟೆಯ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿ ದಿಢೀರನೆ ಪಾಟ್ನಾದಲ್ಲಿ ಪ್ರತ್ಯಕ್ಷರಾದ ಉದಯ ಗರುಡಾಚಾರ್ ಪಕ್ಷೇತರ ಶಾಸಕ ದದನ್ಸಿಂಗ್ ಪೆಹಲ್ವಾನ್ರೊಂದಿಗೆ ಹತ್ತು ಜನ ಶಾಸಕರ ಬೆಂಬಲದ ಸಹಿಯಿರುವ ಪತ್ರದೊಂದಿಗೆ ಆಗಮಿಸುವಷ್ಟರಲ್ಲಿ ಸಮಯ ಡೆಡ್ಲೈನಿನ ಹತ್ತಿರಕ್ಕೆ ಬಂದು ನಿಂತಿತ್ತು. ಅಂದರೆ ಇನ್ನೂ ಹದಿನೈದು ನಿಮಿಷಗಳು ಇದ್ದಂತೆ ತಮ್ಮ ನಾಮಪತ್ರವನ್ನು ಸಲ್ಲಿಸಲಾಯಿತು. ಆದರೆ, ಇದಕ್ಕೂ ಮುನ್ನಾ ಆರ್.ಜೆ.ಡಿ ಪಕ್ಷದ ಕಾರ್ಯಕರ್ತರು ಉದಯ್ ಆಗಮಿಸದಂತೆ ಅವರ ಕಾರಿಗೆ ತಡೆ ಒಡ್ಡಿದರು ಹಾಗು ಶಾಸನ ಸಭೆಯಲ್ಲಿ ಸಮಯ ಮುಗಿದಿದೆ ಎಂದು ಘೋಷಣೆಗಳನ್ನು ಕೂಗಿದ್ದರು.

*ಲೆಕ್ಕಾಚಾರ:
241 ಶಾಸಕರನ್ನು ಹೊಂದಿರುವ ಬಿಹಾರದಲ್ಲಿ ಒಟ್ಟು ಐದು ರಾಜ್ಯಸಭಾ ಸ್ಥಾನಗಳಿದ್ದು, ಆಯ್ಕೆಯಾಗಲು ಒಬ್ಬರಿಗೆ ಕನಿಷ್ಟ 41 ಶಾಸಕರ ಬೆಂಬಲಬೇಕು. ಈಗ ಉದಯ್ ಸೇರಿದರೆ ಆರು ಅಭ್ಯರ್ಥಿಗಳು ಸ್ಪರ್ದೆಯಲ್ಲಿದ್ದರೆ , ಉದಯ್ರವರು ನಾಮಪತ್ರ ಸಲ್ಲಿಸದಿದ್ದರೆ ಐದು ಅಭ್ಯಥರ್ಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು ಹಾಗು ಚುನಾವಣೆಯ ಅಗತ್ಯವೇ ಇರಲಿಲ್ಲ. ಆದರೆ ಈಗ ಕತ್ತಿ ತೂಗುತ್ತಿರುವುದು ಆರ್.ಜೆ.ಡಿ ಮತ್ತು ಎಲ್.ಜೆ.ಪಿ ಪಕ್ಷದ ಎರಡನೇ ಅಭ್ಯಥರ್ಿಯಾದ ರಾಮ್ ಕ್ರಿಪಾಲ್ ಯಾದವ್ ಮೇಲೆ, ಲೆಕ್ಕಾಚಾರಗಳ ಪ್ರಕಾರ ಇವರಿಗೆ 12 ರಿಂದ 14 ಶಾಸಕರ ಮತಗಳ ಕೊರತೆ ಎದುರಾಗಲಿದೆ. ತಾನು ಸೇಫ್ಯೆಂದು ಹೇಳಿಕೊಂಡಿರುವ ಉದಯ್ ಒಟ್ಟು 45 ಶಾಸಕರ ಬೆಂಬಲವಿರುವ ಬಗ್ಗೆ ನಂಬಿಕೆ ಹೊಂದಿದ್ದಾರೆ, ಅದರಲ್ಲಿ 11 ಪಕ್ಷೇತರರು, 10 ಕಾಂಗ್ರೆಸ್ಸಿಗರು, ಬಿ.ಎಸ್.ಪಿ ಮತ್ತು ಸಿ.ಪಿ.ಐನ 5 ಹಾಗೂ ಎನ್.ಡಿ.ಎಯ ಕೆಲವು ಶಾಸಕರಿದ್ದಾರೆ. ಬಿ.ಜೆ.ಪಿಯ ಒಟ್ಟು ಶಾಸಕರ ಸಂಖ್ಯೆ 137 ಆದ್ದರಿಂದ, ಬಿ.ಜೆ.ಪಿಯ ಉಪೇಂದ್ರ ಕುಶುವಾಹಾ ಹಾಗೂ ಜೆ.ಡಿ.ಯುನ ಆರ್.ಸಿ.ಪಿ.ಸಿನ್ಹಾ ಮತ್ತು ರಾಜೀವ್ ಪ್ರತಾಪ್ ರೂಡಿಗೆ ಯಾವುದೇ ಭಯವಿಲ್ಲ. ಲಾಲೂ ಪ್ರಸಾದ್ ಸಾರಥ್ರ್ಯದಲ್ಲಿರುವ ಆರ್.ಜೆ.ಡಿ ಮತ್ತು ಎಲ್.ಜೆ.ಪಿ ಶಾಸಕರು 68, ಇದರಲ್ಲಿ ರಾಮ್ ವಿಲಾಸ್ ಪಾಸ್ವಾನ್ 41 ಶಾಸಕರ ಮತವನ್ನು ಪಡೆಯುವುದು ಪೂರ್ವ ನಿರ್ಧರಿತ. ಆದರೆ, ರಾಮ್ ಕ್ರಿಪಾಲ್ ಯಾದವರ ಸ್ಥಿತಿ ಅಯೋಮಯ. ಇದರ ನಡುವೆ ಗೊಂದಲದಲ್ಲಿ ಸಿಲುಕಿರುವವರು ಕಾಂಗ್ರೆಸ್ಸಿನ ಶಾಸಕರು, ಮೂರು ಶಾಸಕರು ಉದಯ್ ಗರುಡಾಚಾರ್ರ ನಾಮಪತ್ರ ಸಲ್ಲಿಕೆಯ ಸಂದಭದಲ್ಲಿ ಬೆಂಬಲವನ್ನು ಸೂಚಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡದಂತೆ ಆದೇಶವನ್ನು ಹೊರಡಿಸಿತ್ತು ಹಾಗು ಈಗ 'ವಿಪ್' ಕೂಡಾ ಜಾರಿಮಾಡಿದೆಯೆಂದು ಕಾಂಗ್ರೆಸ್ಸಿನ ಅಧ್ಯಕ್ಷರಾದ ಮೆಹಬೂಬ್ ಅಲಿ ಕೈಸರ್ ತಿಳಿಸಿದ್ದಾರೆ. ಇದು ಅಡ್ಡಗೋಡೆಯ ಮೇಲೆ ದೀಪವನ್ನು ಇಟ್ಟಂತಾಗಿದೆ.

*ಬಿಹಾರವೇ ಏಕೆ?...
ಇದು ಸಾಮಾನ್ಯವಾಗಿ ನಮ್ಮನ್ನು ಕಾಡೋ ಪ್ರಶ್ನೆ, ಬೆಂಗಳೂರನ್ನು ಬಿಟ್ಟು ಬಿಹಾರಕ್ಕೆ ಹೋಗಿದ್ಯಾಕೇಂತಾ..? ಇದಕ್ಕೆ ಉದಯ್ ಗರುಡಾಚಾರ್ ಹೇಳೋದು, "ಜ್ಞಾನದೇಗುಲವೆಂದೇ ಪ್ರಸಿದ್ಧಿಯನ್ನು ಪಡೆದಿದ್ದ ನಾಡು ಬಿಹಾರ, ಇಲ್ಲಿರುವ ಪಾಟಲೀಪುತ್ರದಂತಹ ಅನೇಕ ಐತಿಹಾಸಿಕ ತಾಣಗಳು ಅದಕ್ಕೆ ಸಾಕ್ಷಿ. ಹಾಗೂ ಇಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ರವರ ಕಾರ್ಯಚಟುವಟಿಕೆಗಳ ಬಗ್ಗೆ ನನಗೆ ಗೌರವವಿದೆ ಮತ್ತು ಅದರಿಂದ ಪ್ರಭಾವಿತನಾಗಿದ್ದೇನೆ. ಮುಖ್ಯವಾಗಿ ಬಿಹಾರವೂ ಬೆಂಗಳೂರಿನಂತೆ ಬೆಳೆಯಬೇಕೆಂಬುದು ನನ್ನ ಇಚ್ಛೆ, ಅದಕ್ಕೆ ಬಂಡವಾಳ ಹೂಡಿಕೆದಾರರ ಅಗತ್ಯವಿದೆ ಆ ಕೆಲಸವನ್ನು ನಾನು ಮಾಡಬಲ್ಲೆ ಮತ್ತು ಕರ್ನಾಟಕದಲ್ಲಿ ವಿಜಯ್ ಮಲ್ಯಾರಂತಹ ಅನೇಕರಿದ್ದಾರೆ ಆದಕಾರಣ ನಾನು ಇಲ್ಲಿ ಬಂದಿರೋದು ಅಪರಾಧವೇನಲ್ಲಾ. ಹಾಗೇ ಇದರಿಂದ ಕನ್ನಡಿಗರು ಏನೂ ಎಂಬುದನ್ನು ವ್ಯಕ್ತಪಡಿಸುವ ಅವಕಾಶವೂ ದೊರೆತಿದೆ." ಈ ಕ್ಷೇತ್ರದಲ್ಲಿ ಹಲವು ಕಾರಣಗಳಿಂದಾಗಿ ಉದಯ್ ಗರುಡಾಚಾರ್ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿಗಳು ನಾಮಪತ್ರದಲ್ಲಿ ಸೂಚಿಸಿರುವ ಒಟ್ಟು ಆಸ್ತಿಯ ಮೌಲ್ಯದಲ್ಲಿ ಅತೀ ಹೆಚ್ಚು ಉದಯ್ರವರದು(20 ಕೋಟಿ).

* ಹೀಗಿರಬಹುದು...!
# ಒಂದು ಚುನಾವಣೆಯಲ್ಲಿ ಗೆಲ್ಲಲು ಈಗಿನ ಸಂದರ್ಭದಲ್ಲಿ ಕೋಟ್ಯಾಂತರ ಹಣವನ್ನು ಸುರಿಯಬೇಕು, ಆದರೆ ಬಿಹಾರದಂತಹ ಹಿಂದುಳಿದ ರಾಜ್ಯದಲ್ಲಿ ಈ ಖರ್ಚು ಸ್ವಲ್ಪ ಕಡಿಮೆಯೇ ಆಗಬಹುದು.
# ಲಾಲೂ ಪ್ರಸಾದರ ನಿಯಂತ್ರಣಕ್ಕೆ ಅಡ್ಡಿಯೊಡ್ಡಲು ಇಚ್ಚಿಸಿರುವ ಕೆಲವು ಶಾಸಕರ ಬೆಂಬಲ ಉದಯ್ಗೆ ದೊರೆತಿದೆ. ಇದನ್ನು ಬೆಳೆಸಿಕೊಂಡು ಒಬ್ಬ ಅಭ್ಯರ್ಥಿಯನ್ನು ಹಿಂದಿಟ್ಟರೂ ಸಾಕು ಸೀಟು ಗ್ಯಾರಂಟಿ.
# ತಮ್ಮ ಉದ್ಯಮವನ್ನು ಬಿಹಾರದಲ್ಲೂ ಬೆಳೆಸಬೇಕೆಂಬ ಕನಸು ರಾಜ್ಯಸಭೆಯಲ್ಲಿನ ಸ್ಥಾನದಿಂದ ನನಸಾಗಬಹುದು.

ಅಂತೂ ಕನ್ನಡಿಗರೊಬ್ಬರು ಹೊರರಾಜ್ಯದಲ್ಲಿ ತಮ್ಮ ಛಾಪನ್ನು ಮೂಡಿಸಲು ಹೊರಟಿದ್ದಾರೆ. ಈ ನಿರೀಕ್ಷೆಯ ಕುತೂಹಲ ಇದೇ ಜೂನ್ 17ರ ನಂತರ ತಣಿಯಲಿದೆ.

0 Comments:

Post a Comment