Saturday, June 5, 2010


ಬಿಡದಿಯ ಏಕಶಿಲಾ ಮೂರ್ತಿ ಗುಜರಾತಿಗೆ..:
ಅಹಿಂಸೆ ಮತ್ತು ತ್ಯಾಗದ ಸಾಕಾರ ಮೂರ್ತಿಯೆಂದೆ ಪ್ರಸಿದ್ದಿ ಪಡೆದಿರುವ ಕರ್ನಾಟಕದ ಶ್ರವಣಬೆಳಗೊಳದ ಬೃಹತ್ ಬಾಹುಬಲಿಯ 'ತದ್ರೂಪಿ' ಬಿಡದಿಯ ಬಳಿ ಸದ್ಧಿಲ್ಲದೇ ಮೂಡಿದೆ. ಬೆಟ್ಟದ ತುದಿಯಲ್ಲಿ ಶಾಂತವಾಗಿ ನಿಂತಿರುವ ನಿರ್ವಿಕಾರ ಮೂರ್ತಿ ಬಾಹುಬಲಿ ಇನ್ನು ಏಕಾಂಗಿಯಲ್ಲ. ಜಗತ್ತಿನ ಅತ್ಯಂತ ಎತ್ತರದ ಏಕಶಿಲಾ ಮೂರ್ತಿ ಎಂಬ ಖ್ಯಾತಿ ಪಡೆದಿದ್ದ ಈ ಮೂರ್ತಿಗಿಂತ ಅತ್ಯಲ್ಪ ಕಡಿಮೆ ಎತ್ತರದಲ್ಲಿ ಮತ್ತೊಬ್ಬ ಬಾಹುಬಲಿ ಈಗ ಸಿದ್ಧನಾಗಿದ್ದಾನೆ. ಅವನೇ ಗುಜರಾತಿನ ಸೋನಾಘಡದಲ್ಲಿ ಕೆಲವೇ ದಿನಗಳಲ್ಲಿ ಪ್ರತಿಷ್ಠಾಪನೆಯಾಗಲಿರುವ 41 ಅಡಿ ಎತ್ತರದ ಬಾಹುಬಲಿ. ಅಷ್ಟು ಎತ್ತರದ ಈ ಬಾಹುಬಲಿಯ ಹಿನ್ನೆಲೆ ಏನು?
ಕ್ರಿ.ಶ.981ರಲ್ಲಿ ಚಾವುಂಡರಾಯನಿಂದ ನಿರ್ಮಿಸಲ್ಪಟ್ಟ ಬಾಹುಬಲಿ ಮೂರ್ತಿ 59 ಅಡಿ ಎತ್ತರವಿದ್ದು ಮೊದಲನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನಿಂದ 32 ಕಿ.ಮೀ. ದೂರದಲ್ಲಿರುವ ಬಿಡದಿಯ ದಾಸಪ್ಪನ ದೊಡ್ಡಿಯ "ಶಿಲ್ಪಲೋಕ"ದಲ್ಲಿ ಅರಳಿರುವ ಕೆತ್ತನೆಯು 41 ಅಡಿಯಿದ್ದು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. 42 ಅಡಿಯಿರುವ ಕಾರ್ಕಳದ ಗೊಮ್ಮಟೇಶ್ವರ ಸೇರಿದಂತೆ ಇನ್ನೂ ಮೂರುಕಡೆ ಎತ್ತರದ ಏಕಶಿಲಾ ಬಾಹುಬಲಿಯ ಮೂರ್ತಿಯು ಕರ್ನಾಟಕದಲ್ಲಿ ಪ್ರತಿಷ್ಠಾಪನೆಗೊಂಡಿದೆ.
ಜೈನ ಧರ್ಮದ ದಿಗಂಬರ ಸನ್ಯಾಸಿ ಪೂಜ್ಯ ಕಾನಜಿ ಸ್ವಾಮೀಜಿಯವರು ಸುಮಾರು 45 ವರ್ಷಗಳ ಕಾಲ ಧರ್ಮ ಪ್ರಚಾರ ಮಾಡಿದ ಗುಜರಾತಿನ ಭಾವಾನಗರ ಜಿಲ್ಲೆಯ, ಸಿಹೋರ್ ತಾಲ್ಲೂಕಿನಲ್ಲಿರುವ ಸೋನಾಗಡದಲ್ಲಿ ಈ ಬಾಹುಬಲಿಯು ಪ್ರತಿಷ್ಠಾಪನೆಗೊಳ್ಳಲಿದೆ. 1992ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರಿಂದ 'ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ' ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಶಿಲ್ಪಿ 'ಅಶೋಕ್ ಗುಡಿಗಾರ್'ರವರು ಸುಮಾರು ಮೂರು ತಿಂಗಳ ಕಾಲ ಶ್ರವಣಬೆಳಗೊಳದಲ್ಲಿ ಬೀಡುಬಿಟ್ಟು ಗೊಮ್ಮಟ್ಟೇಶ್ವರನ ಅಂಗಾಂಗಗಳ ಅಧ್ಯಯನ ನಡಸಿ, 10 ಜನರ ತಂಡದೊಂದಿಗೆ ಕೆತ್ತನೆಯನ್ನು ಆರಂಭಿಸಿ 15 ತಿಂಗಳ ಸತತ ಪರಿಶ್ರಮದಿಂದ ಸುಂದರ ಶಿಲ್ಪವನ್ನು ನಿರ್ಮಿಸಿದ್ದಾರೆ.
ಗುಜರಾತಿನ ದಿಗಂಬರ ಜೈನ ಸಮುದಾಯದವರು ಇಡೀ ಭಾರತವನ್ನು ಸುತ್ತಿ ಕೊನೆಯಲ್ಲಿ ಬಿಡದಿಯ ಪ್ರತಿಭಾವಂತನಿಗೆ ಈ ಕೆಲಸದ ಗುತ್ತಿಗೆ ನೀಡಿದ ಬಳಿಕ, ಅಶೋಕ್ರವರು ಉತ್ತಮ ಗುಣಮಟ್ಟದ ಕಲ್ಲಿಗಾಗಿ ನಾನಾ ಕಡೆ ಹುಡುಕಾಟ ನಡೆಸಿ ದೇವನಹಳ್ಳಿಯ ಕ್ವಾರಿ ಪ್ರದೇಶದಿಂದ ಸುಮಾರು 400 ಟನ್ ತೂಕದ ಗ್ರಾನೈಟ್ ಕಲ್ಲನ್ನು ತೆಗಿಸಿ, 36.5 ಅಡಿಯ ಬಾಹುಬಲಿಯು 4.5 ಅಡಿಯ ಪೀಠದ ಮೇಲೆ ನಿಂತಿರುವ ಹಾಗೆ ಕೆತ್ತಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದಾರೆ. ಇದರ ಅಗಲ 14 ಅಡಿ ಮತ್ತು 7 ಅಡಿ ದಪ್ಪವಿದ್ದು ಸುಮಾರು 200 ಟನ್ಗಳಷ್ಟು ತೂಗುತ್ತದೆ.
ಸುಮಾರು 112 ಚಕ್ರಗಳುಳ್ಳ 'ಹೈಡ್ರೋಲಿಕ್' ತಂತ್ರಜ್ಞಾನವಿರುವ ಟ್ರಕ್ನ ಮೇಲೆ ಮೂತರ್ಿಯನ್ನು ಬಹಳಾ ಜಾಗರೂಕತೆಯಿಂದ ಏರಿಸಿದ್ದು, ಇದನ್ನು 10 ಚಕ್ರಗಳ ವೋಲ್ವೋ ಲಾರಿಯು ಎಳೆದೊಯ್ಯುತ್ತಲಿದೆ. ಇದೇ ಭಾನುವಾರ ಬಿಡದಿಯಿಂದ ಪ್ರಯಾಣವನ್ನು ಆರಂಭಿಸಿದ್ದು ಸುಮಾರು 30 ದಿನಗಳಲ್ಲಿ ಗುಜರಾತನ್ನು ಸೇರುವ ನಿರೀಕ್ಷೆಯಿದೆ. ತದನಂತರದಲ್ಲಿ ಬಾಹುಬಲಿ ಮೂರ್ತಿಯ ಹಿಂಭಾಗದ ಕೆಲಸವನ್ನು ಅಲ್ಲೇ ಪೂರ್ಣಗೊಳಿಸಿ ಪ್ರತಿಷ್ಠಾಪಿಸಲಾಗುವುದು. ಅದಕ್ಕಾಗಿಯೇ ಸೋನಾಗಡದಲ್ಲಿ 60 ಅಡಿಯ ಗುಡ್ಡದ ಮೇಲೆ 40 ಅಡಿಯ ಪೀಠವು ನಿರ್ಮಾಣಗೊಂಡಿದ್ದು, ಇದರ ಮೇಲೆ ಬಾಹುಬಲಿಯನ್ನು ಪ್ರತಿಷ್ಠಾಪಿಸಬೇಕೆಂದು ಜೈನ ಸಮುದಾಯವು ತಕ್ಕ ಸಿದ್ಧತೆ ನಡೆಸಿದೆ.
ಈ ಮೂರ್ತಿಯ ಕೆತ್ತನೆಗೆ ಅಗತ್ಯವಿದ್ದ ಕಲ್ಲು, ಕೆತ್ತನೆಯ ಕೆಲಸ ಹಾಗೂ ಸಾಗಣೆಯ ವೆಚ್ಚ ಎಲ್ಲವೂ ಸೇರಿದರೆ ಅಂದಾಜು ಒಂದು ಕೋಟಿ ರೂಪಾಯಿಯಷ್ಟಾಗುತ್ತದೆ. ಇದರಲ್ಲಿ ಸಾರಿಗೆಗೇ ಸುಮಾರು 50 ಲಕ್ಷದವರೆಗೆ ಖರ್ಚಾಗಿದೆ. ಇಂತಹ ಅಪರೂಪದ ಬೃಹತ್ ಏಕಶಿಲಾ ಮೂರ್ತಿಯನ್ನು ನಿರ್ಮಿಸಿದ ಅಶೋಕ್ ಗುಡಿಗಾರ್ ಮೂಲತಃ ಶಿವಮೊಗ್ಗದ ಸಾಗರದವರು, ಇವರ ಕಲೆಗೆ ಈಗಾಗಲೇ ಸಾಕ್ಷಿಯಾಗಿ ನಿಂತಿರುವುದು "ಹರಿದ್ವಾರದಲ್ಲಿರುವ 38 ಅಡಿಯ ಹನುಮ, ಕುಕ್ಕೆ ಸುಬ್ರಹ್ಮಣ್ಯದ 21 ಅಡಿಯ ವಿನಾಯಕ ಹಾಗೂ ನಟ 'ಅರ್ಜುನ್ ಸರ್ಜಾರ' ಅವರು ಚೆನೈನಲ್ಲಿ ಸ್ಥಾಪಿಸಿರುವ 28 ಅಡಿ ಎತ್ತರದ ಹನುಮಂತ". ಒಟ್ಟಿನಲ್ಲಿ ಇಂತಹ ಅದ್ಭುತ ಕಲಾವಿದ ಕನ್ನಡಿಗನೆಂಬುದು ನಮ್ಮೆಲ್ಲರ ಹೆಮ್ಮೆ .

0 Comments:

Post a Comment