Sunday, October 24, 2010


ಸಿಕ್ಕೀತೆ ಹೊಸ ಭೂಮಿ..!
ಯುವಜೋಡಿಗಳು 'ಹನಿ-ಮೂನ್'ಗಾಗಿ ಚಂದ್ರಲೋಕಕ್ಕೆ ಹೋಗಬೇಕು ಅನ್ನೊ ಬಯಕೆಯ ಕನಸು ಚಿಗುರೊಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಭೂಮಿಯಂತೆಯೇ ಇರೊ ಮತ್ತೊಂದು ಗ್ರಹವಿದೆ ಎಂದು ತಿಳಿದರೆ ಚಂದಿರನ ಮೇಲಿನ ಆಸೆ ಕೊಂಚ ಕಡಿಮೆಯಾಗಬಹುದು....ಹಾ..! ಅಂತಹದೊಂದು ಗ್ರಹ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಆದರೆ, ಅಲ್ಲಿಗೆ ಹೋಗುವಂತಹ ತಂತ್ರಜ್ಞಾನ ಇನ್ನೂ ಆವಿಷ್ಕಾರಗೊಂಡಿಲ್ಲ. ಭೂಮಿಯಿಂದ ನೀವು ಅಲ್ಲಿಗೆ ತಲುಪಲು ಕನಿಷ್ಟಪಕ್ಷ 20 ಜ್ಯೋತಿರ್ವರ್ಷಗಳಾದರೂ ಬೇಕು. ಅಂದರೆ, ಬೆಳಕಿನ ವೇಗದಲ್ಲಿ ಹೋದರೆ 20ವರ್ಷಗಳು, ಬಹುಶಃ ಅಷ್ಟರಲ್ಲಿ ನಿಮ್ಮ ಹನಿಮೂನ್ ಕನಸು ಬತ್ತಿ ಹೋಗುವ ಸಂಭವ ಜಾಸ್ತಿ. ಆ ಮಟ್ಟದ ವೇಗವನ್ನು ಇನ್ನೂ ಯಾರಿಂದಲೂ, ಯಾವುದರಿಂದಲೂ ಮುಟ್ಟಲಾಗಿಲ್ಲ....'ಬೆಳಕಿಗೆ, ಬೆಳಕೇ ಸಾಟಿ'. ನಮ್ಮ ಸೌರಮಂಡಲದ ಹೊರಗಿನ ನಕ್ಷತ್ರ 'ಎಂ3ವಿ ಗ್ಲೀಸೆ581'ನ ಸುತ್ತುತ್ತಿರುವ ಗ್ರಹಕ್ಕೆ ಕೊಟ್ಟಿರುವ ಹೆಸರು 'ಗ್ಲೀಸೆ 581ಜಿ'.
ಸುಮಾರು ಹನ್ನೊಂದು ವರ್ಷಗಳಿಂದ 'ಕ್ಯಾಲಿಫೋನರ್ಿಯಾ ವಿಶ್ವವಿದ್ಯಾಲಯದ' ಯು.ಎಸ್. ಸಂಶೋಧಕರು ತುಲಾ ನಕ್ಷತ್ರ ಗುಂಪಿನಲ್ಲಿನ, ಗ್ಲೀಸೆ581 ನಕ್ಷತ್ರದ ಸುತ್ತಲಿರು ಆರು ಗ್ರಹಗಳ ಪೈಕಿ ಒಂದು ಗ್ರಹದ ಸ್ವರೂಪವನ್ನು ಅರಿಯುವ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದಾರೆ. ಜೀವಜಲಗಳ ಸೃಷ್ಟಿ ಸಾಧ್ಯವಾಗಬಹುದಾದಂತಹ ಪರಿಧಿಯ ಒಳಗೆ ಕಂಡು ಬರುತ್ತಿರುವ ಗ್ಲೀಸೆ 581ಜಿ ಗ್ರಹ ಅನ್ಯ ಜೀವಸಂಕುಲಗಳ ಬಗೆಗೆ ಹೊಸ ಭರವಸೆ ಹಾಗೂ ಕುತೂಹಲವನ್ನು ಮೂಡಿಸಿದೆ. ಈ ಗ್ರಹವು ಭೂಮಿಗಿಂತ ಒಂದೂವರೆ ಪಟ್ಟು ಹೆಚ್ಚು ಸುತ್ತಳತೆಯನ್ನು ಹೊಂದಿದ್ದು, ಗಾತ್ರದಲ್ಲಿ 3ರಿಂದ4 ಪಟ್ಟು ಹೆಚ್ಚಿದೆ. ಮಂದ ಬೆಳಕಿನ ನಕ್ಷತ್ರದ ಸುತ್ತಾ ಸುತ್ತುವ ಈ ಗ್ರಹವು ತನ್ನ ಕಕ್ಷೆಯಲ್ಲಿ ನಿಶ್ಚಲವಾಗಿದ್ದು ಭೂಮಿಯಂತೆ ಸುತ್ತುವುದಿಲ್ಲ. ಆದ್ದರಿಂದ ಇಲ್ಲಿ ಹಗಲೂ ಮತ್ತು ರಾತ್ರಿಗಳಿಲ್ಲ. ಈ ಗ್ರಹವು ನಕ್ಷತ್ರವನ್ನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಸಮಯ ಕೇವಲ 37ದಿನಗಳು ಮಾತ್ರ. ಅದೇ ಭೂಮಿಯು ಸೂರ್ಯನ ಪ್ರದಕ್ಷಣೆ ಬರಲು 365ದಿನಗಳ ಕಾಲ ತೆಗೆದುಕೊಳ್ಳುತ್ತದೆ. ವಿಶೇಷ ಗುರುತ್ವಾಕರ್ಷಣ ಶಕ್ತಿಯು ಇದರ ಪಥ ಬದಲಿಸದಂತೆ ಸ್ತಬ್ಧವಾಗಿಸಿದೆ, ಇದರ ಸಲುವಾಗಿ ಒಂದು ಕಡೆ ಸದಾ ಬಿಸಿಲು, ಮತ್ತೊಂದು ಕಡೆಗೆ ಕಗ್ಗತ್ತಲು....ಇಂತಹ ವಾತಾವರಣದಲ್ಲಿ ಜೀವಿಗಳ ಸೃಷ್ಟಿ ಅಸಾಧ್ಯವೆನಿಸಿದರೂ, ಅದಕ್ಕೆ ಅನುಗುಣವಾಗಿ ಉಷ್ಣತೆಯನ್ನು ಕಾಯ್ದಿಡುವ ಪದರಗಳ ಸುತ್ತುವರಿಕೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಭೂಮಿಗೆ ರಕ್ಷಾ ಕವಚದಂತಿರುವ 'ಓಜೋನ್' ಪದರವೂ ಸಹ ಬರಿಯ ಕಣ್ಣಿಗೆ ಗೋಚರಿಸುವುದಿಲ್ಲ. ಕೋಟಿಗಟ್ಟಲೆ ಮೈಲಿಗಳಷ್ಟು ದೂರವಿರುವ ಗ್ರಹಗಳ ನಡುವೆ ಭೂಮಿಗೆ ಹತ್ತಿರವಿರುವ 117ನೇ ಗ್ರಹ ಇದು. ಸೌರ ಮಂಡಲದ ಹೊರಗೆ ಇದುವರೆಗೂ ಸುಮಾರು 490ಕ್ಕೂ ಹೆಚ್ಚು ಗ್ರಹಗಳನ್ನು ಪತ್ತೆ ಮಾಡಿರುವ ವಿಜ್ಞಾನಿಗಳು ಕನಿಷ್ಟ ವಾರಕ್ಕೆ ಒಂದರಂತೆ ಹೊಸ ಗ್ರಹಗಳ ಪಟ್ಟಿಮಾಡುತ್ತಿದ್ದಾರೆ. ಅಂತೂ ಈ ಸಂಶೋಧನೆಗಳು ಏಲಿಯನ್ಗಳ ಇರುವಿಕೆಯನ್ನು ಮುಂದೊಂದು ದಿನ ಸಾಬೀತು ಮಾಡಬಹುದು.
ನಮ್ಮ 'ಮಿಲ್ಕಿ ವೇ ಗ್ಯಾಲಾಕ್ಸಿ'ಯಲ್ಲಿ ಸೂರ್ಯನಂತಹ ನೂರಾರು ನಕ್ಷತ್ರಗಳಿವೆ. ಹಾಗೆಯೆ ಅವುಗಳ ಸುತ್ತಾ ಸುತ್ತುವ ಗ್ರಹಗಳ ಗುಂಪೂ ದೊಡ್ಡದೇ ಇದೆ. ಈ ಗ್ಯಾಲಾಕ್ಸಿಯಂತಹ ಅದೆಷ್ಟೋ ನಕ್ಷತ್ರ ಪುಂಜಗಳು, ಅದೆಷ್ಟು ಗ್ರಹಗಳನ್ನ ಒಡಲಲ್ಲಿ ಅಡಗಿಸಿಕೊಡಿದೆಯೋ...? 'ಆಕಾಶ' ಎಂಬ ಮೂರು ಅಕ್ಷರಗಳ ಅಗಲ ಅರಿತವರು ಯಾರೂ ಇಲ್ಲ.

0 Comments:

Post a Comment