Tuesday, August 3, 2010


ಗುಳುಂ ಗೋವಿಂದ

ಆಷಾಢ ಮಾಸ ಕಾಂಗ್ರೆಸ್ ಕಾರ್ಪೊರೇಟರ್ಗಳ ಪಾಲಿಗೆ ಬಿರುಗಾಳಿಯನ್ನೇ ಎಬ್ಬಿಸಿದೆ. ಚುನಾವಣೆಯಲ್ಲಿ ಟಿಕೇಟ್ ಸಿಗೋಕೆ ಮುಂಚೆನೇ ಎಲ್ಲೆಲ್ಲಿ ಎಷ್ಟೆಷ್ಟು ಮಾಡಬಹುದು, ಹೂಡೋ ಹಣಕ್ಕೆ ಬಡ್ಡಿ ಸೇರಿ ಬರಬಹುದಾದ ಮೊತ್ತವೆಷ್ಟು...ಹೀಗೆ ಪ್ರೀ-ಪ್ಲಾನ್ಡಾಗಿ ಸ್ವಾರ್ಥ ಮನೋಭಾವವನ್ನು ಬೆಳಿಸಿಕೊಂಡಿರೊ ಪುಢಾರಿ ರಾಜಕಾರಣಿಗಳು, ತಮ್ಮ ಕರ್ತವ್ಯವೇನು ಅನ್ನೋದನ್ನ ತಿಳಿಯೋ ಗೋಜಿಗೆ ಹೋಗಿಲ್ಲ. ಇಂತಹವರಿಂದಲೆ ಇಂದು "ರಾಜಕಾರಣ" ಅಂದರೆ ಯುವಜನತೆಯ ಪಾಲಿಗೆ, ಥೂ..! ಅಸಹ್ಯ...ಎನ್ನುವಂತಾಗಿದೆ. ಬಿ.ಬಿ.ಎಂ.ಪಿಯ ಭಂಡರು ಸರದಿ-ಸಾಲಿನಲ್ಲಿ ನಿಂತು ತಾವೇ ತೋಡಿಕೊಂಡ ಖೆಡ್ಡದೊಳಗೆ ಬೀಳುತ್ತಿದ್ದಾರೆ. ಅದೂ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾರ್ಪೊರೇಟರ್ ಒಬ್ಬ ಲಂಚದ ಅಮಲಿನಲ್ಲಿ ತೇಲುತ್ತಿದ್ದಾಗಲೇ ಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಇಂಗು ತಿಂದ ಮಂಗನಂತಾದವನು ಇದೇ ಮೊದಲ ಸಲ ಆಯ್ಕೆಯಾಗಿದ್ದ ಎಲ್. ಗೋವಿಂದರಾಜು. ಭ್ರಷ್ಟಾಚಾರದ ಭೂತ ಹಾಲಿ-ಮಾಜಿಯೆನ್ನದೆ ಎಲ್ಲರ ತಲೆ ಹೊಕ್ಕು, ಕುರುಡು ಕಾಂಚಾಣದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಣೆ ಕಡೆ ನಮ್ಮ ನೋಟ ಹರಿಸೋಣ.

ಆ ದಿನ...:
ಜುಲೈ 17 ಶನಿವಾರ ಬೆಳಿಗ್ಗೆ ಎರಡು ಲಕ್ಷದೊಂದಿಗೆ ಸೀದಾ ಗೋವಿಂದರಾಜು ಮನೆಗೆ ಬಂದ ಬಿಲ್ಡರ್ ಜೆ. ಉದಯ್ ಕುಮಾರ್, ಹಣವನ್ನು ಆತನ ಕೈಗಿಡುತ್ತಿದ್ದಂತೆ ಮೊಗದಲ್ಲಿ ಚಿಮ್ಮಿದ ಆನಂದ ಪಸರಿಸುವ ಮುನ್ನವೆ ಗೋವಿಂದರಾಜು ಲೋಕಾಯುಕ್ತರ ಬಲೆಯಲ್ಲಿ ವಿಲಿವಿಲಿವದ್ದಾಡುತ್ತಿದ್ದ. ಲೋಕಾಯುಕ್ತ ಎಸ್ಪಿ ಮಧುಕರ್ ಶೆಟ್ಟಿ ನೇತೃತ್ವದ ತಂಡ ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ 7,13(1)(ಡಿ) ಮತ್ತು 13(2)ರಂತೆ ಗೋವಿಂದರಾಜು ವಿರುದ್ಧ ದೂರು ದಾಖಲಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದೆ. ಮುನಿರತ್ನನ ಪ್ರಕರಣದಿಂದ ಇನ್ನೂ ಸಾವರಿಸಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಬಂದೆರಗಿದ ಮತ್ತೊಂದು ಸಿಡಿಲು, ಪಾಲಿಕೆಯ ಪ್ರತಿಪಕ್ಷದ ನಾಯಕ ಎಂ. ನಾಗರಾಜ್ರನ್ನು ತಡಕಾಡುವಂತೆ ಮಾಡಿತ್ತು. ತಕ್ಷಣದಲ್ಲೇ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ಪತ್ರವನ್ನು ರವಾನಿಸಿದ್ದರಿಂದ, ಪಕ್ಷದ ಘನತೆಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾನೆಂದು ಆಪಾದಿತನನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು.

ವಿವರಣೆ:
1.63 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಬನಶಂಕರಿ 3ನೇ ಹಂತದ, ಗಣೇಶ ಮಂದಿರ, ವಾರ್ಡ್ ಸಂಖ್ಯೆ.165ರಲ್ಲಿ ಚನ್ನಮ್ಮನ ಕೆರೆ ಅಚ್ಚುಕಟ್ಟಿನ ಪೋಲೀಸ್ ಠಾಣೆಯ ಸಮೀಪ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಪಾರ್ಟಮೆಂಟಿನ ಕಟ್ಟಡದ ನಕ್ಷೆ ಉಲ್ಲಂಘಿಸಲಾಗಿದೆ ಎಂದು ಗೋವಿಂದರಾಜು ಬಿ.ಬಿ.ಎಂ.ಪಿ ಕೆಲಸಗಾರರನ್ನು ಕಳುಹಿಸಿ ಕಟ್ಟಡದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಂತೆ ತಾಕೀತು ಮಾಡಿದ್ದನು. ಇದರಿಂದ ಎಚ್ಚರಗೊಂಡವನಂತೆ ಬಿಲ್ಡರ್ ಉದಯ್ ಕುಮಾರ್, ಲಂಚ ಕೊಟ್ಟು ವಿಚಾರವನ್ನು ಅದುಮಿ ಬಿಡೋಣವೆಂದು ಮಾತುಕತೆಗೆ ಕೂತಾಗ ಕಾರ್ಪೊರೇಟರ್ ಫಿಕ್ಸ್ ಮಾಡಿದ ಮೊತ್ತ ಎಂಟು ಲಕ್ಷ. ಆದರೆ, ಚೌಕಾಸಿ ಮಾಡಿದ ಉದಯ್ ಹೇಗೋ 2ಲಕ್ಷಕ್ಕೆ ಉಪ್ಪಿಸಿ ಕೈ ಮುಗಿದಿದ್ದರು. ಅಧಿಕಾರ ಇದ್ದಷ್ಟು ದಿನ ಕೈಗೆ ಸಿಕ್ಕಷ್ಟು ಬಾಚಿಕೊಳ್ಳಬೇಕೆಂದು ನಿರ್ಧರಿಸಿದ್ದ ಗೋವಿಂದರಾಜು, ಇಂಥಾ ಅವಕಾಶವನ್ನು ಕಳೆದುಕೊಳ್ಳುವ ಮನಸ್ಸಾಗದೆ ಮತ್ತೆ ಮೂರು ಲಕ್ಷ ಕೊಡುವಂತೆ ಒತ್ತಾಯಮಾಡಲು, ಅದಾಗಲೇ ಪಾಪ ಉದಯ್ ಅದೆಷ್ಟು ಜನರ ಬಾಯಿಗೆ ಹಣವನ್ನು ಸುರಿದ್ದಿದ್ದರೋ ಏನೊ...ಕೊನೆಗೆ ಜುಲೈ 16ರಂದು ಸಂಜೆ ಲಿಖಿತ ರೂಪದಲ್ಲಿ ಲೋಕಾಯುಕ್ತರಿಗೆ ದೂರು ನೀಡಿಯೇ ಬಿಟ್ಟರು. ಭ್ರಷ್ಟರ ವಿರುದ್ಧ ಮಾಡಬಹುದಾದ ಉತ್ತಮ ಕೆಲಸ ಇದಾದರೂ, ಕಟ್ಟಡವು ನಕ್ಷೆ ಪ್ರಕಾರ ಇಲ್ಲದಿರುವ ಕಾರಣಕ್ಕೆ ತಾನು ಸಿಕ್ಕಿ ಬೀಳಬಹುದು ಎಂಬ ಭಯವೂ ಇಲ್ಲದೆ ಈ ನಿರ್ಧಾರವನ್ನು ಮಾಡಿರಬೇಕಾದರೆ, ಅವರ ಹಿಂದೆ ಕಾಣದ ಪ್ರಭಾವಿಗಳ ಬೆಂಬಲವಿರುವುದು ಸ್ಪಷ್ಟ. ನಕ್ಷೆಯಲ್ಲಿ ತೋರಿಸದ ಇನ್ನೊಂದು ಮಹಡಿಮನೆಯನ್ನು ಕಟ್ಟಲು ಹೋಗಿದ್ದೇ ಈ ಅವಾಂತರಕ್ಕೆ ಕಾರಣ. ನಿರ್ಮಾಣ ಕಾರ್ಯವು 2009ರ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಿ ಈಗಲೂ ನಿರ್ವಿಗ್ನವಾಗಿ ಮುಂದುವರಿಯುತ್ತಿದ್ದು, ಅಂತಿಮ ಹಂತದಲ್ಲಿದೆ.
ಆದರೆ ಗೋವಿಂದರಾಜು, "ನಾನು ಅಕ್ರಮ ಕಟ್ಟಡದ ಬಗ್ಗೆ ಮೇಯರ್ಗೆ ತಿಳಿಸಿದ್ದೆ ಹಾಗೂ ನನ್ನ ಗೆಳೆಯನಿಗಾಗಿ ಪೈನಾನ್ಸಿಯರ್ ಉದಯ್ನಿಂದ ಸಾಲ ಪಡೆಯುತ್ತಿದ್ದೆ, ಆ ಸಮಯದಲ್ಲಿ ಈ ದಾಳಿನಡೆಯಿತು" ಎಂಬ ಕಂತೆ ಪುರಾಣವನ್ನು ಮಾಧ್ಯಮಗಳ ಮುಂದಿಟ್ಟಿದ್ದನು. ಈತನೇ ಹೇಳುವಂತೆ ಇದು 'ವಿರೋಧ ಪಕ್ಷದ ಕೈವಾಡ'ವೆಂಬುದನ್ನು ತಳ್ಳಿಹಾಕಲು ಆಗದಿದ್ದರೂ, ಇವ ಲಂಚ ಪಡೆದ್ದದ್ದು ಸತ್ಯ. ಈ ಹಿಂದೆ ಶಾಸಕರ ಭವನದಲ್ಲೇ ಲಂಚ ಪಡೆಯುತ್ತಿದ್ದ ಕೋಲಾರ ಶಾಸಕ ಬಿ.ಜೆ.ಪಿಯ ವೈ. ಸಂಪಂಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು, ಆದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದೆ ಮೊಂಡುತನವನ್ನು ಮೆರೆದಿದ್ದರು. ಇದರಿಂದಲೇ ಬೆದರಿದ ಸರಕಾರ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರವನ್ನು ನೀಡಲು ಮೀನಾ-ಮೇಷಾ ಎಣಿಸಿದ್ದು. ಇದನ್ನೇ ಆಧಾರವಾಗಿಟ್ಟುಕೊಂಡು ಗೋವಿಂದರಾಜು ತನ್ನಿಂದ ತಪ್ಪಾಗಿದ್ದರೂ ರಾಜೀನಾಮೆ ಸಲ್ಲಿಸುವುದಿಲ್ಲ, ಮೊದಲು ಶಾಸಕ ಸಂಪಂಗಿ ಹಾಗು ಗಣಿದಣಿಗಳು ರಾಜೀನಾಮೆ ನೀಡಲಿ, ಬಿ.ಜೆ.ಪಿ. ಬೇರೆ ಪಕ್ಷಗಳನ್ನು ಮುಳುಗಿಸೋ ಪ್ರಯತ್ನದಲ್ಲಿದೆ ಎಂಬ ಮಾತುಗಳನ್ನಾಡಿದ್ದಾನೆ. ನ್ಯಾಯಾಲಯದ ಆಧೇಶಕ್ಕಾಗಿ ಕಾಯುತ್ತಿರು ಕಾಂಗ್ರೇಸ್ ಪಕ್ಷ ಇವನನ್ನು ಪಕ್ಷದಿಂದ ಹೊರಗುಳಿಸುವ ತಯಾರಿಯಲ್ಲಿದೆ ಹಾಗೂ ಕಾರ್ಪೊರೇಟರ್ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತ.

ಗೊಂದಲದ ಗೂಡು:
ಗೋವಿಂದರಾಜುವಿನ ತಂದೆ ಲಕ್ಷ್ಮಣಪ್ಪ, ಇವರದೇ ಹೆಸರಿನ ಲಕ್ಷ್ಮಣಪ್ಪ ಗಾರ್ಡನ್ನಿನಲ್ಲಿ ಸ್ವಂತ ಮನೆಯಿದೆ. ಅದರ ಪಕ್ಕಕ್ಕೆ "ಬಾಲಾಜಿ" ಹಾಗೂ "ಪಂಚಮುಖಿ" ಎಂಬ ಕಲ್ಯಾಣಮಂಟಪ, ಮುಖ್ಯರಸ್ತೆಯಲ್ಲೇ ಇರುವ ಜಿ.ಟಿ.ಆರ್. ಪ್ರಿನ್ಸ್ ಪ್ಯಾಲೇಸ್, ತ್ಯಾಗರಾಜನಗರದಲ್ಲಿ ಅಂಗಡಿ, ಮನೆಗಳು,...ಹೀಗೆ ಕೋಟಿಗಟ್ಟಲೆ ಆಸ್ತಿಯಿದೆ. ತನ್ನದೇ ಡೀಲಿಂಗ್ಗಳಲ್ಲಿ ಬಿಸಿಯಾಗಿದ್ದ ಗೋವಿಂದರಾಜು ಎರಡು ವರ್ಷಗಳ ಹಿಂದೆಯಷ್ಟೆ ಬಿ.ಜೆ.ಪಿಯಿಂದ ರಾಜಕೀಯದಲ್ಲಿ ಪ್ರವೇಶ ಪಡೆದಿದ್ದರು. ಆನಂತರದಲ್ಲಿಬಿ.ಬಿ.ಎಂ.ಪಿಯ ಚುನಾವಣೆಗೆ ಪಕ್ಷದಿಂದ ತನ್ನದೇ ವಾರ್ಡ್ನಲ್ಲಿ ಟಿಕೆಟ್ ಸಿಗಲಿಲ್ಲ. ಏಕೆಂದರೆ ಅದಾಗಲೇ ಹಿಂದೆ ಕಾರ್ಪೊರೇಟರ್ರ ಆಗಿ ಹಾಗೂ 2005-06ರಲ್ಲಿ ಪ್ರತಿಪಕ್ಷದ ನಾಯಕನಾಗೂ ಆಯ್ಕೆಯಾಗಿ, ಆಗಿನ ಗಣೇಶ ಮಂದಿರ ವಾರ್ಡ್ ಸಂಖ್ಯೆ.56ರಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿ ಜನಪ್ರಿಯರಾಗಿದ್ದ ಎ.ಎಚ್. ಬಸವರಾಜ್ರ ಮೇಲೆ ಸಚಿವ ಅಶೋಕ್ರ ಪ್ರಭಾವ ಹೆಚ್ಚಾಗೆ ಇತ್ತು, ಆದ್ದರಿಂದ ಟಿಕೆಟ್ ಬಸವರಾಜು ಪಾಲಾಯಿತು. ಅದಾಗಲೇ ಗೋವಿಂದರಾಜು ಜನರನ್ನು ಓಲೈಸಲು ಸಾಕಷ್ಟು ಹಣ ಖರ್ಚು ಮಾಡಿ "ಓಂ ಶಕ್ತಿ, ಶಬರಿಯಾತ್ರೆ, ರಾಘವೇಂದ್ರ ಸ್ವಾಮಿ ದರ್ಶನ"ಗಳನ್ನು ಮಾಡಿಸಿಯಾಗಿತ್ತು. ಮಾಡಿದ ವೆಚ್ಚದ ಎರಡರಷ್ಟು ಮಾಡುವ ಆತುರದಲ್ಲಿದ್ದವನಿಗೆ ದಾರಿತೋಚದೆ, ಕಾಂಗ್ರೆಸ್ಸಿನ ಸ್ಥಳೀಯ ಮುಖಂಡ ಗುರಪ್ಪನಾಯ್ಡು ಹಾಗೂ ಯುವ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಬೈರೇಗೌಡರನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸಿ ಸೀಟುಗಿಟ್ಟಿಸುವಲ್ಲಿ ಯಶಸ್ವಿಯಾಗಿ, ಚುನಾವಣೆಯಲ್ಲಿ ವಾರ್ಡನ ಕೆಳ ಹಾಗೂ ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿಕೊಂಡು ಹಣ ಹಂಚಿ ಮತ್ತು ಜೆ.ಡಿ.ಎಸ್ನಲ್ಲಿ ಗುರುತಿಸಿಕೊಂಡಿದ್ದ ಕೇಬಲ್ ಉಮೇಶ್ರ ಬೆಂಬಲ ಪಡೆದು ಗೆಲುವನ್ನು ಸಾಧಿಸಿದ್ದಾಯಿತು. ಈ ನಡುವೆ ಕಾಂಗ್ರೆಸ್ಸಿನಿಂದ ಅಭ್ಯರ್ತಿಯಾಗಬೇಕಿದ್ದ ಬಾಲಾಜಿ ಯಾದವ್ ಬಂಡಾಯ ಅಭ್ಯಥಿಯಾಗಿ ನಿಲ್ಲಬೇಕಾದ ಸ್ಥಿತಿ ಎದುರಾಯಿತು, ಅಷ್ಟೇ ಅಲ್ಲದೇ ಪ್ರಚಾರಕಾರ್ಯದಲ್ಲಿದ್ದಾಗ ಹೆಂಗಸರಿಂದ ಬಾಲಾಜಿ ಮೇಲೆ ಹಲ್ಲೆಯಾಗಿತ್ತು. ಇದನ್ನು ಮಾಡಿಸಿದ್ದು ಗೋವಿಂದರಾಜು ಎಂದು ಆರೋಪಿಸಲಾಗಿತ್ತು.
ನಂತರದಲ್ಲಿ ಗೋವಿಂದರಾಜು ಹೊರಟಿದ್ದು ಹಣದ ಹೆಗಲನ್ನೇರಿ. ಬಿಲ್ಡರ್ ಉದಯ್ ಹಾಗೂ ಗೋವಿಂದರಾಜು ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡಿದ್ದು ಕೇಬಲ್ ಉಮೇಶ್, ಮತ್ತು ಈ ಟ್ರಾಪ್ನ ಸೂತ್ರಧಾರ ಬಿ.ಜೆ.ಪಿಯ ಬಸವರಾಜ್ ಎಂದು ಸುದ್ಧಿ ಹಬ್ಬಿತ್ತಾದರೂ, ಉದಯ್ ಎಂಬುವರು ಯಾರೆಂಬ ಪರಿಚಯವೇ ಇಲ್ಲಾ ಎಂದು ಬಸವರಾಜ್ ಆರೋಪವನ್ನು ಅಲ್ಲಗೆಳೆದಿದ್ದಾರೆ. ಬಸವರಾಜ್ 1995ರ ಸುಮಾರಿನಲ್ಲಿ ಬಿ.ಬಿ.ಎಂ.ಪಿಯಲ್ಲಿ ಹೆಡ್ ಗ್ಯಾಂಗ್ಮನ್ ಆಗಿ 2,500 ರೂಪಾಯಿಯ ಸಂಬಳ ಪಡೆಯುತ್ತಿದ್ದರು. ಹೀಗಿದ್ದವರು, ಈಗ ಬನಶಂಕರಿ ಅಮ್ಮನವರ ದೇವಸ್ಥಾದ ಅಧ್ಯಕ್ಷರಾಗಿದ್ದಾರೆ ಹಾಗೂ ಪ್ರತಿವರ್ಷ ಸಾಮೂಹಿಕ ವಿವಾಹವನ್ನು ನಡೆಸುತ್ತಿದ್ದಾರೆ ಮತ್ತು ಚಿಕ್ಕಲ್ಲಸಂದ್ರ, ಗೌಡನಪಾಳ್ಯ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟಗಳಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪಾರ್ಟಮೆಂಟ್ ಹಾಗೂ ಇತರೆ ಕಟ್ಟಡಗಳಿವೆ. ಬಿ.ಬಿ.ಎಂ.ಪಿಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಇಷ್ಟೊಂದು ಆಸ್ತಿ ಗಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡೋದು ಸಹಜ. ಈ ಪ್ರಶ್ನೆಗೆ ಬಸವರಾಜ್ ಹೇಳೋ ಉತ್ತರ, ತಾನು ಜಮೀನ್ದಾರ್ ಮನೆತನದಿಂದ ಬಂದವನೆಂದು.
ಒಟ್ಟಿನಲ್ಲಿ ಗಣೇಶ ಮಂದಿರ ವಾರ್ಡಿನಲ್ಲಿ ದೇವರ ವಿಷಯದಿಂದ ಹಿಡಿದೂ ದುಡ್ಡಿನವರೆಗು ಪೈಪೋಟಿ ಹೆಚ್ಚಾಗೆಯಿದೆ. ಗೋವಿಂದರಾಜು ಒಂದು ದೇವಿ ದೇವಸ್ಥಾನವನ್ನು ಇತ್ತೀಚಿಗಷ್ಟೆ ನಿರ್ಮಿಸಿದ್ದರು. ಇವರದೇ ಆದ ಪಂಚಮುಖಿ ಹಾಗೂ ಬಾಲಾಜಿ ಕಲ್ಯಾಣಮಂಟಪಗಳ ನಿರ್ಮಾಣವೇ ವಿಚಿತ್ರ, ಪಾರ್ಕಿಂಗ್ ಮಾಡೋ ಸ್ಥಳದಲ್ಲಿ ಒಂದು ಮಂಟಪದ ಹಾಲ್, ಅದರ ಮೇಲೆ ಇನ್ನೊಂದು ಮಂಟಪ. ಇದನ್ನು ಸೇಪ್ ಮಾಡೊ ದೃಷ್ಟಿಯಿಂದ ಅಂಡರ್ ಗ್ರೌಂಡಿನಲ್ಲೊಂದು ದೇವಸ್ಥಾನ. ನಿಯಮದ ಪ್ರಕಾರ ಕೆಳ ಮಹಡಿಯಲ್ಲಿ ಅಡುಗೆ ಮನೆ ಇರುವ ಹಾಗಿಲ್ಲಾ ಹಾಗೂ ವಾಹನಗಳ ನಿಲುಗಡೆಗೆ ಸರಿಯಾದೆ ವ್ಯವಸ್ಥೆ ಇರಬೇಕು, ಇದ್ಯಾವುದು ಇಲ್ಲಿ ಸರಿಯಿಲ್ಲ. ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಈ ವಿಚಾರ ಹಿಂದಿನ ಕಾರ್ಪೊರೇಟರ್ಗಳಿಗೆ ಅದ್ಯಾಕೆ ತಿಳಿದಿರಲಿಲ್ಲವೋ..? ಬಹುಶಃ ಒಪ್ಪಂದದ ವ್ಯಾಲಿಡಿಟಿ ಇನ್ನೂ ಮುಗಿದಿರಲಿಲ್ಲ ಎಂದು ಕಾಣುತ್ತದೆ.
ಕೆಲಸ ಮಾಡಬೇಕಾದ ಕಾರ್ಪೊರೇಟರ್ ಕಾಂಚಾಣದ ಹಿಂದೆ ಬಾಲವಾಡಿಸುತ್ತ ಹೋಗುತ್ತಿರೋದು, ರಾಜಕೀಯ ಅಂದರೆ ದ್ರವ್ಯರಾಶಿಯ ಕೊಳ್ಳೆ ಹೊಡೆಯುವ ರಾಜಮಾರ್ಗ ಎಂಬ ಅರ್ಥವನ್ನು ಕಲ್ಪಿಸುತ್ತಿದೆ. ಇದು ಕೇವಲ ಒಂದು ಜಿಲ್ಲೆಯ, ಒಂದು ವಾರ್ಡಿನ ಕಥೆಯೆ ಇಷ್ಟೊಂದಿದ್ದರೆ, ಉಳಿದ ಜಿಲ್ಲೆಗಳ, ರಾಜ್ಯದ ಸ್ಥಿತಿ ಯಾವ ಮಟ್ಟದಲ್ಲಿದೆ ಎಂದು ಯೋಚಿಸಿದರೆ........ಇದೇನಾದರು ಹೀಗೆ ಮುಂದುವರಿದರೆ, ನಾವು ಮುಂದಿನ ಕೆಲ ವರ್ಷಗಳಲ್ಲಿ ಪ್ರಾಮಾಣಿಕ(!?) ರಾಜಕಾರಣಿಗಳನ್ನು ಬೇರೆ ರಾಜ್ಯದಿಂದಲೋ, ದೇಶದಿಂದಲೋ ಎರವಲು ಪಡೆಯಬೇಕಾದೀತು!

0 Comments:

Post a Comment