Monday, July 12, 2010


"ಸೆಮಿಫೈನಲ್ ಶಾಸ್ತ್ರ...ಆಕ್ಟೋಪಸ್ ಅವಾಂತರ"

ಗಿಳಿ ಶಾಸ್ತ್ರ, ಹಾಲುವಕ್ಕಿ ಶಕುನ ಕೇಳೀ ಕೇಳೀ..ಬೇಜಾರಾಗಿದ್ದರೆ, ಸಮುದ್ರದ ತಳಭಾಗದಲ್ಲಿ ವಾಸಿಸೋ ಎಲುಬಿಲ್ಲದ "ಆಕ್ಟೋಪಸ್" ಹತ್ತಿರ ಒಮ್ಮೆ ಪ್ರಯತ್ನಿಸಬಹುದು. ಆದರೆ, ಇದಕ್ಕಾಗಿ ನೀವು ಜರ್ಮನಿವರೆಗೆ ಹೋಗಬೇಕು ಅಷ್ಟೆ. ಹಾ...! ಜರ್ಮನಿಯ ಮ್ಯೂಸಿಯಂ ಒಂದರಲ್ಲಿ ಬಂಧಿಯಾಗಿರುವ ಅಕ್ಟೋಪಸ್ "ಪಾಲ್", ವಿಶ್ವಕಪ್ ಪುಟ್ಬಾಲ್ ಸಮರದ ಎರಡನೇ ಸೆಮಿಫೈನಲ್ ವರೆಗೆ ಜರ್ಮನ್ ತಂಡದ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ದೇವ ಸ್ವರೂಪಿಯಾಗಿದ್ದ. ಈಗ ಅದೇ ಜನರ ಡಿನ್ನರ್ಗೆ ಸೂಪಾಗೋ ಸ್ಥಿತಿಗೆ ತಲುಪಿದೆ.

ಭವಿಷ್ಯವಾಣಿ:
ಇಂಗ್ಲೇಂಡ್ನಲ್ಲಿ ಹುಟ್ಟಿದ ಪಾಲ್, ಜರ್ಮನಿಯ ಪಾಲಾದ ಬಳಿಕ ತನ್ನ ಭವಿಷ್ಯವಾಣಿಯನ್ನು 2008ರಿಂದ ಪ್ರಾರಂಭಿಸಿದ. ಅಂದರೆ ಇದು ಮಾತನಾಡುವ ಆಕ್ಟೋಪಸ್ ಖಂಡಿತ ಅಲ್ಲ. ಆಹಾರವನ್ನು ಇಡಲಾಗಿರುವ ಎರಡು ಗಾಜಿನ ಡಬ್ಬಿಗಳಿಗೆ ಎರಡು ರಾಷ್ಟ್ರಗಳ ರಾಷ್ಟ್ರ ಧ್ವಜವನ್ನು ಅಂಟಿಸಲಾಗಿರುತ್ತದೆ, ಅಕ್ಟೋಪಸ್ ಯಾವ ಡಬ್ಬಿಯ ಆಹಾರವನ್ನು ಮೊದಲು ಸೇವಿಸುತ್ತದೊ ಆ ದೇಶದ ಪುಟ್ಬಾಲ್ ತಂಡ ಪಂದ್ಯದಲ್ಲಿ ಜಯಭೇರಿ ಬಾರಿಸುತ್ತದೆಂಬ ನಂಬಿಕೆ ಜರ್ಮನ್ ಜನರಲ್ಲಿ ಆಳವಾಗಿ ಬೇರೂರಿದೆ. ಇದುವರೆಗಿನ ಪಾಲ್ನ ಸೆಲೆಕ್ಟಿಂಗ್ ಭವಿಷ್ಯ ಒಮ್ಮೆ ಮಾತ್ರ ಸುಳ್ಳಾಗಿದೆ, ಅಂದು "ಯೂರೋಕಪ್"ನ ಪಂದ್ಯದಲ್ಲಿ ಜರ್ಮನಿ ಗೆಲುವನ್ನು ಸಾಧಿಸುತ್ತದೆಂಬ ನಂಬಿಕೆ ಸ್ಪೇನ್ನಿಂದ ಮುರಿದುಬಿದ್ದಿತ್ತು. ಜರ್ಮನ್ ವಿಶ್ವಕಪ್ನಲ್ಲಿ ಆಡಿದ ಐದು ಪಂದ್ಯಗಳ ಫಲಿತಾಂಶ ಆಕ್ಟೋಪಸ್ ಸೂಚಿಸಿದಂತೆ ಆಷ್ಟ್ರೇಲಿಯ, ಗಾನಾ, ಅಜರ್ೆಂಟೀನಾ, ಇಂಗ್ಲೆಂಡ್ ತಂಡಗಳನ್ನು ಮಣಿಸಿ ಮುನ್ನುಗಿದ್ದು "ಪಾಲ್"ನನ್ನು ವಿಶ್ವವಿಖ್ಯಾತನನ್ನಾಗಿ ಮಾಡಿಬಿಟ್ಟಿತು. ಇದೇ ಪ್ರಸಿದ್ಧಿ ಮಾರಕವಾಗಿ ಪರಿಣಮಿಸಿದ್ದು, ಜರ್ಮನಿ ಮತ್ತು ಸ್ಪೇನ್ ನಡುವಿನ ಅಂತಿಮ ಹಂತದ ಹೋರಾಟದ ಬಗ್ಗೆ ಪಾಲ್ ನೀಡಿದ ಸೂಚನೆಯಿಂದ, ಅದೇನೆಂದರೆ ಜರ್ಮನಿ ಈ ಪಂದ್ಯದಲ್ಲಿ ಮಣ್ಣುಮುಕ್ಕುತ್ತದೆಂಬ ಭವಿಷ್ಯ. ಸೆಮಿಫೈನಲ್ನಲ್ಲಿ ಸ್ಪೇನ್ ಗೆಲುವಿನ ಮೂಲಕ ಈ ಭವಿಷ್ಯ ನಿಜವಾಗಿದೆ.

ಅಡುಗೆಗೆ ಆಕ್ಟೋಪಸ್:
ಪಾಲ್ನ ಭವಿಷ್ಯದಿಂದ ದಿಗ್ಭ್ರಾಂತರಾದ ಜರ್ಮನರು, ಇದೇನಾದರು ನಿಜವೇ ಆದರೆ ಈ ಆಕ್ಟೋಪಸ್ನನ್ನು ಮ್ಯೂಸಿಯಂನಿಂದ ಹೋಟೆಲ್ಗೆ ಮಾರಾಟ ಮಾಡಲಾಗುತ್ತದೆ ಹಾಗೂ ಹೋಟೆಲ್ನ ಸಿಬ್ಬಂದಿ ಆಕ್ಟೋಪಸ್ನ್ನು ಕತ್ತರಿಸಿ ಸುವಾಸನಾಭರಿತ "ಸೂಪ್" ತಯಾರಿಸಿ ಗ್ರಾಹಕರಿಗೆ ಉಣಬಡಿಸಲಿದ್ದಾರೆ ಎಂಬ ಕಠೋರ ನಿಲುವುಗಳನ್ನು ಕೈಗೊಂಡಿದ್ದರು. ಈಗ ಜರ್ಮನಿ ಸೋಲನ್ನು ಕಂಡಿದೆ, ಮುಂದೆ ಆಕ್ಟೋಪಸ್ ಜೀವ ಅಡುಗೆಯಲ್ಲಿ ಅಂತಿಮವಾಗುತ್ತಾ....?

ಮಾತು ಬಾರದ, ಸನ್ನೆ ತಿಳಿಯದ, ಎಲುಬಿಲ್ಲದ ಪ್ರಾಣಿಗಳಲ್ಲೇ ಅತಿ ಬುದ್ಧಿವಂತ ಪ್ರಾಣಿಯೆಂದು ಕರೆಸಿ ಕೊಳ್ಳುವ ಆಕ್ಟೋಪಸ್ ಮೂಲತಃ ತ್ಯಾಗ ಜೀವಿ. ಇವು ತನ್ನ ಮರಿಗಳ ರಕ್ಷಣೆಗಾಗಿ ಸುಮಾರು ಆರು ತಿಂಗಳ ಕಾಲ ಸತತ ಹೋರಾಟವನ್ನು ನಡೆಸಿ ಪ್ರಾಣತ್ಯಾಗ ಮಾಡುತ್ತದೆ, ಆಕ್ಟೋಪಸ್ ಸತ್ತ ನಂತರವೂ ಅನೇಕ ಜಲಚರಗಳಿಗೆ ಆಹಾರವಾಗಿ ಸಾಕಾರಗೊಳ್ಳುತ್ತದೆ. ಇಂತಹ ಅದ್ಭುತ ಜೀವಿಯನ್ನು ಗಾಜಿನ ಗೋಡೆಗಳ ಮಧ್ಯೆ ಬಂಧಿಸಿರುವುದು ಸಾಲದೆ ಮನುಷ್ಯ ತನ್ನ ಮೂರ್ಖ-ಮೂಢ ಸ್ವಭಾವದಿಂದ ಅಪರೂಪದ ಜೀವಿಯನ್ನು ಬಲಿಕೊಡಲು ಹೊರಟಿರೋದು ಎಷ್ಟು ಸರಿ...?
ಇತರೆ ಪ್ರಾಣಿಗಳು ಮಾನವನ ಕಾಲು ನೆಕ್ಕಬೇಕು, ತನ್ನ ಮನಸ್ಸಿಗೆ ಸಂತೋಷ ನೀಡುವಂತೆ ನಡೆದುಕೊಳ್ಳುವುದೇ ಅವುಗಳ ಆದ್ಯ ಕರ್ತವ್ಯ ಎಂಬ ಸ್ವಾರ್ಥ ಮನೋಭಾವ, ಕ್ರೀಡೆಯಲ್ಲಿ ಸೋಲು-ಗೆಲುವುಗಳು ಕಣದಲ್ಲಿರುವ ಆಟಗಾರರ ಮೇಲೆ ಮಾತ್ರವೇ ಅವಲಂಬಿತವಾಗಿರುತ್ತದೆಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಸ್ವಕಲ್ಪಿತ ಶಾಸ್ತ್ರಗಳ ಮೊರೆಹೋಗಿ ಮುಗ್ಧ ಜೀವಿಗಳ ಮಾರಣಹೋಮ ನಡೆಸಲು ನಿರ್ಧರಿಸುವುದು ಜರ್ಮನಿಯಂತಹ ಪ್ರಗತಿಪರ ದೇಶದಲ್ಲೂ ಇಂಥಾ ಬೂಟಾಟಿಕೆಗಳು ನಡೆಯುತ್ತವೆಂಬುದಕ್ಕೆ ಸಾಕ್ಷಿಯಾಗಿದೆ.
ಬಹುಶಃ ಆಕ್ಟೋಪಸ್ನ ಮೈಮಾಟ ಯಾರದೋ ಬಾಯಲ್ಲಿ ನೀರೂರಿಸಿತ್ತು ಎಂದು ಕಾಣುತ್ತದೆ, ಆ ವ್ಯಕ್ತಿ ಇಂತಹ ಷಡ್ಯಂತ್ರ ಹೂಡಿ ಭಕ್ಷಣೆಗಾಗಿ ಸರ್ವಸಿದ್ಧತೆ ನಡೆಸಿರಬೇಕು. ಅಂತೂ ಬಹು ನಿರೀಕ್ಷಿತ ಜರ್ಮನ್ ತಂಡ ಸೋತು ಮನೆಗೆ ಮರಳುವ ಹಾದಿಯಲ್ಲಿದೆ, ಇದೇ ಕುಂಟು ನೆಪ ಹೇಳಿ ಪಾಲ್ನನ್ನು ನೀರಿನಿಂದ ಹೊರಗೆಳೆಯದಿದ್ದರೆ ಸಾಕು.

0 Comments:

Post a Comment